ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಹರಿಲೀಲೆ - ದಂಪತಿಗಳ ಯಕ್ಷ ಸೇವೆ

ಲೇಖಕರು : ಗಣಪತಿ ಹಾಸ್ಪುರ
ಶುಕ್ರವಾರ, ಡಿಸೆ೦ಬರ್ 5 , 2014

ಯಕ್ಷಸಾಗರಕ್ಕೆ ಗಂಡು ನದಿಗಳೇ ಬಂದು ಸೇರುತ್ತಿದ್ದವು. ಈಗ ಹೆಣ್ಣು ನದಿಗಳೂ ಸೇರುತ್ತಿವೆ. ಜತೆಗೆ, ಗಂಡ- ಹೆಂಡತಿ ಇಬ್ಬರೂ ಒಟ್ಟಾಗಿ ಯಕ್ಷ ಸೇವೆ ನಡೆಸುತ್ತಿರುವುದು ಅಪರೂಪದ ಉದಾಹರಣೆಗಳು. ಆ ಅಪರೂಪಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಇಲ್ಲಿದೆ...

ಗಂಡಸರ ಕಲೆಗೆ ಹೆಂಗಸರ ಪ್ರವೇಶ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳದಲ್ಲಿ ಈಗ ಲೇಡಿಸ್ಸೂ ಫಸ್ಟೇ. ಅದರಲ್ಲೂ ಅಲ್ಲಲ್ಲಿ ದಂಪತಿಗಳು ಯಕ್ಷ ಸೇವೆಯಲ್ಲಿ ತೊಡಗಿಸಿಕೊಂಡು ಅಚ್ಚರಿ ಹುಟ್ಟಿಸುತ್ತಾರೆ. ಅಂಥ ಮುಖಗಳ ಸಾಲಲ್ಲಿ ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾ ಬೈಪಾಡಿತ್ತಾಯ ದಂಪತಿಯೂ ಸೇರುತ್ತಾರೆ.

ಗಂಡ ಮದ್ದಲೆ ವಾದಕ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಡಬದ ನಿವಾಸಿ ಕೆ. ಹರಿನಾರಾಯಣ ಮದ್ದಲೆ ವಾದಕರು. ಯಕ್ಷಗಾನ ಕುಟುಂಬದಲ್ಲೇ ಜನಿಸಿ, ಯಕ್ಷಗಾನಕ್ಕಾಗಿಯೇ 7ನೇ ಕ್ಲಾಸಿಗೆ ಓದನ್ನು ಸ್ಟಾಪ್ ಮಾಡಿ, 'ಚೆಂಡೆಯ ಗುಡುಗು' ನೆಡ್ಲೆಯ ನರಸಿಂಹ ಭಟ್‌ರಿಂದ ಚಂಡೆ- ಮದ್ದಳೆಯ ಅಭ್ಯಾಸ ಆರಂಭಿಸಿದರು. ಸಮಗ್ರ ಮೃದಂಗ ಸಾಹಿತ್ಯದ ಆಳ ಪ್ರಯೋಗಗಳು ಇವರಿಗೆ ರೂಢಿ.

15ನೇ ವಯಸ್ಸಿನಲ್ಲಿ ತಿರುಗಾಟ ಮೇಳದ ಪರಿಣತ ಮೃದಂಗವಾದಕ. ಕುಂಡಾವು, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಕುಂಬಳೆ, ಬಪ್ಪನಾಡು, ತಲಕಳ... ಇತ್ಯಾದಿ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ಹರಿನಾರಾಯಣ ಕಲಾಸೇವೆ ಹರಿಸುತ್ತಿದ್ದಾರೆ. ದಾಮೋದರ ಮಂಡೆಚ್ಚರು, ಆಗರಿ ಭಾಗವತರು, ಬಲಿಪ ಭಾಗವತರು, ಚಿಪ್ಪಾರ ಕೃಷ್ಣಯ್ಯ ಬಲ್ಲಾಳ್ ಮುಂತಾದ ಭಾಗವತರಿಗೆ ಮೃದಂಗದ ಸಾಥ್ ನೀಡಿದ ಹೆಗ್ಗಳಿಕೆ ಇವರದ್ದು.

ಸುಶ್ರಾವ್ಯವಾಗಿ ಯಕ್ಷ ಪದ್ಯಗಳನ್ನು ಹಾಡುವ ಪ್ರತಿಭೆಯೂ ಇವರ ಕಂಠಕ್ಕಿದೆ. ಶ್ರೇಣಿ, ಕುಂಬಳೆ, ಬಣ್ಣದ ಮಾಲಿಂಗ, ಕುಟ್ಯಪ್ಪು, ಪಡ್ರೆ ಚಂದು, ಕೋಳ್ಯೂರು ರಾಮಚಂದ್ರರಾವ್, ಪಾತಾಳ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣಭಟ್, ಮಹಾಲಿಂಗ ಭಟ್ ಮುಂತಾದ ಘಟಾನುಘಟಿ ಕಲಾವಿದರನ್ನು ಇವರು ಕಂಠದಿಂದಲೇ ಕುಣಿಸಿದ್ದಾರೆ.

ಲೀಲಾ ಅದ್ಭುತ ಭಾಗವತೆ

ಪತ್ನಿಯಾದ ಲೀಲಾ ಯಕ್ಷಗಾನದ ಭಾಗವತಿಕೆಯಲ್ಲಿ ಪ್ರವೀಣೆ. ತವರುಮನೆಯ ಬಡತನದಿಂದಾಗಿ ವಿದ್ಯಾಭ್ಯಾಸವನ್ನು ಕೈಚೆಲ್ಲಿ, ಪಕ್ಕದ ಮನೆಯವರಿಂದ ಅಕ್ಷರ ಕಲಿತರು. ಮಧೂರಿನ ಪದ್ಮನಾಭ ಸರಳಾಯರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ. ಪತಿಯೇ ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರಿಯವಾಗಿದ್ದರಿಂದ ಲೀಲಾ ಅವರ ಆಸೆ- ಆಕಾಂಕ್ಷೆಗೂ ರೆಕ್ಕೆಪುಕ್ಕ ಲಭಿಸಿತು. ಯಕ್ಷಗಾನದ ಸೆಳೆಯಿತು. ಪತಿಯಿಂದಲೇ ಯಕ್ಷ ಪದ್ಯಗಳನ್ನು ಹೇಳಿಸಿಕೊಂಡರು.

ಯಕ್ಷಗಾನವೇ ವೃತ್ತಿಯಾದಾಗ ಹರಿನಾರಾಯಣ ಅವರಿಗೆ ನಿತ್ಯ ಊರಿಂದ ಊರಿಗೆ ಹೋಗುವುದು ಅನಿವಾರ್ಯವೇ ಆಯಿತು. ಜತೆಗೆ ಲೀಲಾರನ್ನೂ ಕರೆದೊಯ್ದರು. ಕಡಬದ ತಾಳಮದ್ದಲೆಯಲ್ಲಿ ಪದ್ಯಗಳನ್ನು ಹೇಳಿದ ಲೀಲಾ ಅವರ ಸುಮಧುರ ಕಂಠವು ಟೆಂಟು ಮೇಳಗಳ ಒಡೆಯರ ಗಮನ ಸೆಳೆಯಿತು. ಅಲ್ಲಿಂದ ಅವರ ಗಾನವೃತ್ತಿ ಶುರುವಾಯಿತು.

ಲೀಲಾ ಥೇಟ್ ಪುರುಷ ಭಾಗವತರಂತೆ ಯಕ್ಷ ಪದ್ಯ ಹೇಳುತ್ತಾರೆ. ಭಾಗವತಿಕೆಯೇ ಇವರಿಗೆ ಉಸಿರು. ಏಕಾಂಗಿಯಾಗಿಯೇ ಇಡೀ ಆಟವನ್ನು ನಡೆಸಿಕೊಡುತ್ತಾರೆ. ಇವರು ರಾಜ್ಯದ ಏಕೈಕ ವೃತ್ತಿಪರ ಮಹಿಳಾ ಭಾಗವತೆ! 65 ರ ಇಳಿ ವಯಸ್ಸಲ್ಲೂ ಉತ್ಸಾಹಿಯಾಗಿರುವ ಲೀಲಾ, ತರಬೇತಿಯನ್ನು ನೀಡುತ್ತಿದ್ದಾರೆ.

ಹಿಮ್ಮೇಳದಲ್ಲಿ ಪಳಗಿದ ಈ ದಂಪತಿಯ ಯಕ್ಷಸೇವೆ ಗಂಡು ಮೆಟ್ಟಿನ ಕಲೆಯ ಮೈಲುಗಲ್ಲು ಎಂದರೂ ತಪ್ಪಾಗಲಾರದು.



ಕೃಪೆ : http://www.kannadaprabha.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ